ಬೇಸ್‍ಬಾಲ್ -
ಅಮೆರಿಕದ ರಾಷ್ಟ್ರೀಯ ಆಟ. ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಆರಂಭವಾಗುವುದು. ಅಮೆರಿಕದ ಅಧ್ಯಕ್ಷ ಈ ಆಟದ ಉದ್ಘಾಟಕ. 1839ಕ್ಕೂ ಮೊದಲು ಇದನ್ನು ಇಂಗ್ಲೆಂಡ್ ಮತ್ತು ಅಮೆರಿಕ ಎರಡೂ ದೇಶಗಳಲ್ಲೂ ಆಡುತ್ತಿದ್ದರು. ಇಂಗ್ಲೆಂಡಿನಲ್ಲಿ ಆಡುತ್ತಿದ್ದ ರೌಂಡರ್ಸ್ ಎಂಬ ಆಟದಿಂದ ಇದು ರೂಪುಗೊಂಡಿದೆ. ಆದರೆ ಅಮೆರಿಕನ್ನರ ಪ್ರಕಾರ ಇದು ಮೊದಲಿಗೆ 1846 ಜೂನ್ ತಿಂಗಳಲ್ಲಿ ನ್ಯೂ ಜರ್ಸಿಯ ಹೊಬೊಕನ್ನಿನ ಎಲ್ಲಿಯನ್ ಮೈದಾನದಲ್ಲಿ ನಿಕರ್ ಬೋಕರ್ಸ್ ಮತ್ತು ನ್ಯೂಯಾರ್ಕ್‍ನೈನ್ ಪಂಗಡಗಳ ಮಧ್ಯೆ ನಡೆಯಿತು ಎನ್ನಲಾಗಿದೆ.

	ಬೇಸ್‍ಬಾಲ್ ತ್ವರಿತಗತಿಯ ಆಟ. ಇದು ಅಮೆರಿಕದಲ್ಲಿ ಅನೇಕರಿಗೆ ವೃತ್ತಿ. ಹಲವು ಸಂಘಸಂಸ್ಥೆಗಳು ಇದಕ್ಕಾಗಿ ಹುಟ್ಟಿವೆ. ರಾಷ್ಟ್ರೀಯ ಮಟ್ಟದ ಲೀಗ್‍ಗಳಿವೆ. ಸಣ್ಣಪುಟ್ಟ ಲೀಗ್‍ಗಳಿಗಂತೂ ಲೆಕ್ಕವಿಲ್ಲ. ಭವಿಷ್ಯದ ವೃತ್ತಿನಿರತ ಆಟಗಾರರನ್ನು ತಯಾರಿಸುವ ಸಂಘಗಳಿವು. ಕೆಲವು ಕ್ರೀಡಾಪಟುಗಳ ಹೆಸರುಗಳು ಈ ಆಟದ ಇತಿಹಾಸದಲ್ಲಿ ಶಾಶ್ವತವಾದವು. ಅವರಲ್ಲಿ ಬೇಬ್‍ರೂತನ ಹೆಸರು ಮುಖ್ಯವಾದದ್ದು.

	ಉರುಟಾಗಿರುವ ಬ್ಯಾಟಿನಿಂದ ಚಂಡನ್ನು ಹೊಡೆಯುವುದು ಈ ಆಟದ ವೈಶಿಷ್ಟ್ಯ. ಆಟದ ಬಯಲು ವಜ್ರಾಕಾರವಾಗಿರುತ್ತದೆ. (ಡಯಮಂಡ್). ಒಂದು ಮೂಲೆಯಲ್ಲಿ ಬ್ಯಾಟುಗಾರ ನಿಂತಿರುತ್ತಾನೆ. ಅದಕ್ಕೆ ಹೋಮ್‍ಪ್ಲೇಟ್ ಎಂದು ಹೆಸರು. ಅಂಗಳದ ನಾಲ್ಕು ಮೂಲೆಗಳಲ್ಲಿ ನಾಲ್ಕು ನೆಲೆ ಅಥವಾ ಬೇಸ್‍ಗಳಿರುತ್ತವೆ. ಹೋಮ್ ಪ್ಲೇಟ್ ಇಂಥ ಬೇಸ್‍ಗಳಲ್ಲಿ ಒಂದು. ಇದರಿಂದ ಬಲಗಡೆಗೆ 90 ಅಡಿ ದೂರದಲ್ಲಿ ಮೊದಲ ಬೇಸ್. ಅಲ್ಲಿಂದ ಮೂಲೆಗೆ ತಿರುಗಿದರೆ ಎರಡನೆಯ ಬೇಸ್. ಬ್ಯಾಟುಗಾರನ ಎಡಕ್ಕೆ ಮೂರನೆಯ ಬೇಸ್. ಆಟದ ಒಳ ಅಂಗಳಕ್ಕೆ ಇನ್ ಫೀಲ್ಡ್ ಎಂದು ಹೆಸರು. ಹೋಮ್ ಪ್ಲೇಟಿನಿಂದ ಎಡಕ್ಕಿರುವ ಮೂರನೆಯ ಬೇಸ್ ಹಾಗೂ ಬಲಕ್ಕಿರುವ ಮೊದಲನೆಯ ಬೇಸ್‍ಗಳನ್ನು ಹಾಯುವಂತೆ ಎರಡು ಬಿಳಿಯ ಗೆರೆಗಳನ್ನು ಹಾಕಲಾಗಿರುತ್ತದೆ. ಇವುಗಳ ಒಳಗಿನ ಜಾಗದಲ್ಲಿ ಚೆಂಡು ಎಲ್ಲಿ ಉರುಳಿದರೂ ಲೆಕ್ಕಕ್ಕೆ ಬರುವುದಿಲ್ಲ. ಇದರ ಆಚೀಚೆ ಬದಿಯಲ್ಲಿ (ಔಟ್ ಫೀಲ್ಡ್) ಚಂಡುಬಿದ್ದರೆ ಮಾತ್ರ ಅದು ಚಿತ್ತು, ಅಂಗಣದ ಎರಡು ಬಾಹುಗಳನ್ನು ಲಂಬಿಸಿ ಚಿತ್ತುಗೆರೆ ಹಾಕಲಾಗಿರುತ್ತದೆ. ಹೋಮ್‍ಪ್ಲೇಟ್‍ನಿಂದ 60.5 ಅಡಿ ದೂರದಲ್ಲಿ ಅಂಗಣದ ನಡುಭಾಗದಲ್ಲಿ `ಪಿಚ್ಚರ್ ಎಂದರೆ ಚಂಡು ಎಸೆದವನ ನೆಲೆ ಇರುತ್ತದೆ. ಇದು ಎತ್ತರವಾಗಿದ್ದು ಇದರ ಗರಿಷ್ಠ ಎತ್ತರ 15 ಅಂಗುಲ ಇರುತ್ತದೆ.

	ಆಟದ ಬ್ಯಾಟು ಒಂದೇ ತುಂಡು ಮರದಿಂದ ಮಾಡಿದ್ದು. ಅದು 42 ಅಂಗುಲಕ್ಕಿಂತ ಹೆಚ್ಚು ಉದ್ಭವಿರುವುದಿಲ್ಲ. ಇದರ ಗರಿಷ್ಠ ಸುತ್ತಳತೆ 2.75 ಅಂಗುಲ. ಬ್ಯಾಟು ಉರುಟಾಗಿದ್ದು ಒಂದು ತುದಿಯಿಂದ ಇನ್ನೊಂದು ತುದಿಗೆ ಸಪೂರವಾಗುತ್ತ ಹೋಗುವುದು. ಆಟದ ಚಂಡಿನ ಮೇಲುಭಾಗ ಕುದುರೆ ತೂಗಲಿನಿಂದ ಮುಚ್ಚಲ್ಪಟ್ಟಿರುತ್ತದೆ. ಇದರ ತೂಕ 5 ರಿಂದ 5.5 ಔನ್ಸ್, ಸುತ್ತಳತೆ 9 ರಿಂದ 9.5 ಅಂಗುಲ.

	ಒಂಬತ್ತು ಮಂದಿ ಆಟಗಾರರ ಎರಡು ತಂಡಗಳ ನಡುವೆ ನಡೆಯುವ ಆಟವಿದು. ಬ್ಯಾಟುಮಾಡುವ ತಂಡದವರು ಮೊದಲಿಗೆ ನಾಲ್ಕು ಜನ ಹೋಮ್‍ಪ್ಲೇಟ್ ಹಾಗು ಇತರ ನೆಲೆಗಳಲ್ಲಿ ನಿಲ್ಲುತ್ತಾರೆ. ಓಟುಗಳನ್ನು ಗಳಿಸುವುದೇ ಇವರ ಉದ್ದೇಶ. ಎದುರು ತಂಡದವರು ಈ ಬ್ಯಾಟುಗಾರರು ಓಟುಗಳಿಸದಂತೆ ನೋಡಿಕೊಳ್ಳುತ್ತಾರೆ. ಆಟದಲ್ಲಿ ಹೆಚ್ಚು ಓಟು ಗಳಿಸಿದ ತಂಡ ಗೆಲ್ಲುತ್ತದೆ. ಎದುರು ತಂಡದ ಒಂಬತ್ತು ಮಂದಿಯಲ್ಲಿ ಒಬ್ಬ ಪಿಚ್ಚರ್, ಒಬ್ಬ ಕ್ಯಾಚರ್, ಇನ್‍ಫೀಲ್ಡ್‍ನಲ್ಲಿ ನಾಲ್ಕು ಜನ. ಔಟ್‍ಫೀಲ್ಡ್‍ನಲ್ಲಿ ಮೂರು ಜನ ಇರುತ್ತಾರೆ. ರಕ್ಷಣೆಗಾಗಿ ಕ್ಯಾಚರ್ ವಿಶೇಷ ತೊಡುಗೆ, ಶಿರಸ್ತ್ರಾಣ ಕೈಗವಸುಗಳನ್ನು ತೊಟ್ಟಿರುತ್ತಾನೆ. ಉಳಿದವರು ಎಡಗೈಗೆ ಗವಸುಗಳನ್ನು ಧರಿಸಿರುತ್ತಾರೆ.

	ಬ್ಯಾಟುಗಾರ ಚಂಡನ್ನು ಔಟ್‍ಫೀಲ್ಡ್‍ಗೆ ಹೊಡೆದು ಬ್ಯಾಟನ್ನು ಅಲ್ಲಿಯೇ ಬಿಟ್ಟು ಮೊದಲು ಬೇಸ್‍ಗೆ ಓಡುತ್ತಾನೆ. ಇದೇ ವೇಳೆ ಮೊದಲ ಬೇಸ್‍ನಲ್ಲಿರುವವನು ಎರಡನೆಯ ಬೇಸ್‍ಗೂ ಎರಡನೆಯವನ ಮೂರನೆಯದಕ್ಕೂ ಮೂರನೆಯವ ಹೋಮ್‍ಪ್ಲೇಟ್ ನೆಲೆಗೂ ಓಡಿ ಜಾಗ ಹಿಡಿಯಬೇಕು. ಫೀಲ್ಡ್ ಮಾಡುವವರು ಚಂಡನ್ನು ತಡೆದು ಯಾವುದೇ ಬೇಸ್‍ಗೆ ಮುಟ್ಟಿಸಿದರೆ ಅಥವಾ ಓಡುತ್ತಿರುವವರನ್ನು ಚಂಡಿನಿಂದ ಮುಟ್ಟಿಸಿದರೆ ಅವರು ಔಟಾದಂತೆ. ಒಂದು ಓಟ (ರನ್ನು) ಪಡೆಯಬೇಕಾದರೆ ಹೋಮ್‍ಪ್ಲೇಟ್‍ನಿಂದ ಹೊರಟು 1,2,3ನೆಯ ನೆಲೆಗಳನ್ನು ದಾಟಿ ಬಂದು ತನ್ನ ಜಾಗದಲ್ಲಿರಬೇಕು. ಬ್ಯಾಟುಗಾರ ಒಂದಕ್ಕಿಂತ ಹೆಚ್ಚು ರನ್ ಪಡೆಯುವಂತಿಲ್ಲ. ಬ್ಯಾಟುಗಾರ ಪಿಚ್ಚರ್ ಎಸೆಯುವ ಬಾಲಿಗೆ ಕಾದು ಬ್ಯಾಟನ್ನು ಎತ್ತಿ ಹಿಡಿದು ಸಿದ್ಧನಾಗಿ ನಿಂತಿರುತ್ತಾನೆ. ಪಿಚ್ಚರ್ ಎಸೆವ ಚಂಡು ಹೋಮ್ ಪ್ಲೇಟ್ ನೆಲೆಯ ಮೇಲೆ ಹಾಯಬೇಕು. ಬ್ಯಾಟುಗಾರನ ಮಂಡಿಯಿಂದ ಕೆಳಗಿನ ಮಟ್ಟದಲ್ಲಾಗಲಿ ಭುಜಕ್ಕಿಂತ ಎತ್ತರ ಮಟ್ಟದಲ್ಲಾಗಲಿ ಚಂಡು ಹಾಯುವಂತಿಲ್ಲ. ಚಂಡು ಎಸೆಯುವಲ್ಲಿ ಪಿಚ್ಚರನ ಜಾಣ್ಮೆ ಮುಖ್ಯ. ನಿಗದಿಯಾದ ಮಟ್ಟದಲ್ಲಿ ಬಾರದ ಚಂಡಿಗೆ `ಬಾಲ್ ಎಂದು ಹೆಸರು. ಇಂಥ ನಾಲ್ಕು ಬಾಲುಗಳನ್ನು ಅವನು ಎಸೆದರೆ ಬ್ಯಾಟರ್ ಮೊದಲನೆಯ ಬೇಸ್‍ಗೆ ಹೋಗಬೇಕು. ಇದು ರನ್ ಗಳಿಸುವಲ್ಲಿ ಆತ ಮುಂದುವರಿಯಲು ಒಂದು ಅವಕಾಶ. ಇದಕ್ಕೆ ವಾಕ್ ಎಂದು ಹೆಸರು.

	ಚಂಡು ಬ್ಯಾಟುಗಾರನ ಮಂಡಿ ಹಾಗೂ ಭುಜಗಳ ನಡುವಿನ ಮಟ್ಟಗಳಲ್ಲಿ ಹಾಗೂ ಹೋಮ್‍ಪ್ಲೇಟ್‍ನ ಮೇಲೆ ಬಿದ್ದರೂ ಬ್ಯಾಟುಗಾರ ಅದನ್ನು ಹೊಡೆಯದಿದ್ದರೆ ಅದಕ್ಕೆ ಸ್ಟ್ರೈಕ್ ಎಂದು ಹೆಸರು. ಇಂಥ ಸ್ಟ್ರೈಕ್‍ಗಳಾದರೆ ಆತ ಆಟದಿಂದ ಹೊರಗೆ ನಿಲ್ಲಬೇಕು. ಅನಂತರ ಬ್ಯಾಟುಗಾರರ ಪಟ್ಟಿಯ ಕ್ರಮದಂತೆ ಮುಂದಿನವ ಆ ಜಾಗಕ್ಕೆ ಬರುತ್ತಾನೆ. ಸರಿಯಾಗಿ ಬ್ಯಾಟು ಬೀಸಿ ಅದು ಚಂಡಿಗೆ ತಗುಲದಿದ್ದರೂ ಸ್ಟ್ರೈಕ್ ಆಗುತ್ತದೆ. ಚಿತ್ತುಗೆರೆಗಳ ಈಚೆ ಬದಿಗೆ ಚಂಡು ಬಿದ್ದರೆ ಅದೂ ಸ್ಟ್ರೈಕ್, ಬ್ಯಾಟು ಬೀಸುವಾಗ ಬ್ಯಾಟುಗಾರನನ್ನೂ ಚಂಡು ತಾಗಿದರೆ ಅಥವಾ ಬ್ಯಾಟು ತಾಗಿದ ಚಂಡನ್ನೂ ಕ್ಯಾಚರ್ ಹಿಡಿದರೆ ಅವೂ ಸ್ಟ್ರೈಕುಗಳು ಬಾಲ್ ಅಥವಾ ಸ್ಟ್ರೈಕ್ ಯಾವುದು ಎಂದು ನಿರ್ಧರಿಸುವವ ಅಂಪೈರ್.

	ಬ್ಯಾಟುಗಾರ ಹೊಡೆದ ಚಂಡು ಮೊದಲನೆಯ ಬೇಸ್ ಮುಟ್ಟುವ ಮುನ್ನವೇ ಫೀಲ್ಡ್ ಆದರೆ, ಆತ ಮೊದಲ ಬೇಸ್‍ನಲ್ಲೇ ನಿಲ್ಲುತ್ತಾನೆ. ಅದಕ್ಕೆ ಸಿಂಗಲ್ ಎಂದು ಹೆಸರು. ಒಂದೇ ಏಟಿಗೆ ಎರಡನೆಯ ಬೇಸ್ ತಲುಪಿದರೆ ಡಬಲ್; ಮೂರನೆಯ ಬೇಸ್ ತಲುಪಿದರೆ ಟ್ರಿಪಲ್, ಹೊಡೆದ ಚಂಡು ಔಟ್ ಫೀಲ್ಡ್‍ನ ಬೇಲಿ ದಾಟಿದರೆ ಬ್ಯಾಟುಗಾರನಿಗೆ ಒಂದು ಹೋಮ್‍ರನ್ ಸಿಗುತ್ತದೆ. ಈ ಹೋಮ್‍ರನ್ನು ಮೂರು ಬೇಸ್‍ಗಳಿಗೂ ಓಡಿದ ಪ್ರತಿಫಲ. ಬ್ಯಾಟುಗಾರ ಚಂಡನ್ನು ಔಟ್‍ಫೀಲ್ಡ್‍ನಲ್ಲಿ ಅತಿ ದೂರಕ್ಕೆ ಹೊಡೆದು ತಾನು ಮೂರು ಬೇಸ್‍ಗಳನ್ನು ಹಾಯ್ದು ಹೋಮ್ ಪ್ಲೇಟ್ ತಲಪಬಹುದು. 1,2,3,ನೆಯ ಬೇಸುಗಳಲ್ಲಿರುವವರ ಬ್ಯಾಟುಗಾರ ಚಂಡನ್ನು ಹೊಡೆಯದಿದ್ದಾಗಲೂ ತನ್ನ ಮುಂದಿನ ಬೇಸ್‍ಗೆ ಹೋಗಲು ಹವಣಿಸಬಹುದು. ಹೀಗೆ ಮಾಡಿದಾಗ ಆತ ಬೇಸನ್ನು ಕದ್ದು ಪಡೆದ ಎನ್ನುತ್ತಾರೆ.

	ಫೀಲ್ಡರುಗಳು ಓಡುವವನನ್ನು ಚಂಡಿನಿಂದ ಸ್ಪರ್ಶಿಸಿದರೆ, ಓಡುವವನ ಬೇಸ್‍ಗಳ ನಡುವೆ ಗುರುತಿಸಿರುವ ಗೆರೆಯಿಂದ ಆಚೆ ಹೋದರೆ ಅಥವಾ ಆತ ತಲಪಬೇಕಾದ ಬೇಸನ್ನು ರಕ್ಷಕ ತಂಡದವರು ಮೊದಲೇ ಚಂಡಿನಿಂದ ತಾಕಿಸಿದರೆ ಆತ ಆಟಬಿಟ್ಟು ಹೊರಗೆ ನಡೆಯಬೇಕು. ಸ್ಟ್ರೈಕ್ ಗಳಿಲ್ಲದೆ ಬ್ಯಾಟುಗಾರ ಔಟಾಗುವ ಸಂಭವವೂ ಇದೆ. ಹೇಗೆಂದರೆ ಬ್ಯಾಟುಗಾರ ಹೊಡೆದ ಚಂಡು ನೆಲತಾಗುವ ಮೊದಲೇ ಹಿಡಿಯಲ್ಪಟ್ಟರೆ ಅಥವಾ ಅವನು ಹೊಡೆದ ಚಂಡು ಆತ ಓಡಿ ಮೊದಲ ಬೇಸನ್ನು ತಲುಪುವ ಮೊದಲೇ ಅಲ್ಲಿಗೆ ಫೀಲ್ಡ್ ಮಾಡಲ್ಪಟ್ಟರೆ ಆತ ಔಟಾದಂತೆ.

	ಪಿಚ್ಚರ್ ಬೇರೆ ಬೇರೆ ಬಗೆಯಲ್ಲಿ ಚಂಡು ಪುಟಿಯುವಂತೆ ಎಸೆಯಬಹುದು. ಒಟ್ಟಿನಲ್ಲಿ ಪಿಚ್ಚರ್ ಚಂಡು ಎಸೆದರೂ ಬ್ಯಾಟುಗಾರ ಹೆಡೆಯದಂತೆ ಪುಟ ಏಳಿಸುವುದು ಪಿಚ್ಚರನ ಉದ್ದೇಶ. ಎದುರು ತಂಡದವರ ಸ್ಕೋರ್ ಏರದಂತೆ ನೋಡಿಕೊಳ್ಳುವ ಹೊಣೆ ಪಿಚ್ಚರನದು.

	ಈ ಆಟದಲ್ಲಿ ನಡೆದ ಒಟ್ಟು ಒಂಬತ್ತು ಇನ್ನಿಂಗ್ಸ್‍ನಲ್ಲಿ ಹೆಚ್ಚು ಓಟಗಳನ್ನು ಗಳಿಸಿದ ತಂಡ ವಿಜಯಿಯಾಗುತ್ತದೆ. ಒಂದು ಇನ್ನಿಂಗ್ಸ್ ಎಂದರೆ ನಿಗದಿಯಾದಂತೆ ಪ್ರತಿ ತಂಡ ಬ್ಯಾಟು ಮಾಡುವ ಸರದಿ. ಒಂದು ತಂಡದ ಮೂರು ಜನ ಆಟಗಾರರು ಔಟಾದರೆ ಈ ಸರದಿ ಮುಗಿದಂತೆ. ಒಂಬತ್ತು ಇನ್ನಿಂಗ್ಸ್‍ಗಳಾದರೂ ಗೆಲ್ಲಂಕಗಳು ಸಮವಾದರೆ ಸರಿಯಾದ ವ್ಯತ್ಯಾಸ ಬರುವವರೆಗೂ ಆಟ ಮುಂದುವರಿಯುತ್ತದೆ. ಮಳೆ ಮುಂತಾದ ಯಾವುದೇ ಅನಿರೀಕ್ಷಿತ ಕಾರಣಗಳಿಗಾಗಿ ಆಟ ಅರ್ಧದಲ್ಲಿ ನಿಂತರೆ ಆಡಿರುವ ಆಟದಿಂದ ಗೆಲವು ನಿರ್ಧರಿಸಲಾಗುತ್ತದೆ. ಆದರೆ ಇದಕ್ಕೆ ಕನಿಷ್ಠ ಪಕ್ಷ ಐದು ಇನ್ನಿಂಗ್ಸ್‍ಗಳಾದರೂ ಆಗಿರಬೇಕು.				

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ